Algorithm for Fever-Kannada

ಜ್ವರವನ್ನುಂಟು ಮಾಡುವ ಸಾಮಾನ್ಯ ಸೋಂಕುಗಳನ್ನು ಆರಂಭದಲ್ಲಿ ನಿಭಾಯಿಸುವ ಬಗೆ

ಡಾ। ಶ್ರೀನಿವಾಸ ಕಕ್ಕಿಲ್ಲಾಯ, ಎಂಡಿ, ವೈದ್ಯಕೀಯ ತಜ್ಞರು; ಡಾ। ಬಾಲಸರಸ್ವತಿ, ಡಿವಿಡಿ, ಡಿಎನ್‌ಬಿ, ಚರ್ಮ ತಜ್ಞರು; ಡಾ। ವಿಷ್ಣು ಶರ್ಮ, ಎಂಡಿ, ಶ್ವಾಸಾಂಗ ತಜ್ಞರು; ಡಾ। ಶಿವಪ್ರಸಾದ್ ಬಿ, ಎಂಡಿ, ಡಿಎನ್‌ಬಿ, ಪಚನಾಂಗ ತಜ್ಞರು; ಮಂಗಳೂರು

ಬೇಸಗೆ, ಅದರಲ್ಲೂ ಮಳೆಗಾಲ, ಆರಂಭಗೊಳ್ಳುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ, ಇತರ ಭಾಗಗಳಲ್ಲೂ ಮಲೇರಿಯಾ, ಡೆಂಗೀ, ಇಲಿ ಜ್ವರ, ವೈರಾಣುಗಳಿಂದಾಗುವ ಯಕೃತ್ತಿನ ಉರಿಯೂತ (ವೈರಲ್ ಹೆಪಟೈಟಿಸ್) ಮುಂತಾದ ಸೋಂಕು ರೋಗಗಳ ಹರಡುವಿಕೆಯು ಹೆಚ್ಚತೊಡಗುತ್ತದೆ. ಈಗ ಸಾರ್ಸ್-ಕೋವಿ-2 ಎಂಬ ಹೆಸರಿನ ಹೊಸ ಕೊರೊನಾ ವೈರಸ್ ಕೂಡ ಹರಡಲಾರಂಭಿಸಿದ್ದು, ಅದಕ್ಕೆ ನೀಡಲಾಗುತ್ತಿರುವ ಭಯಂಕರ ಪ್ರಚಾರದಿಂದಾಗಿ ಮುಂದಿನ ದಿನಗಳಲ್ಲಿ ಅದರ ಬಗ್ಗೆ ವಿಪರೀತವಾದ ಭಯವೂ, ಗೊಂದಲವೂ ಉಂಟಾಗುವುದು ಖಂಡಿತವಾಗಿದೆ. ಆದ್ದರಿಂದ ಈ ಸೋಂಕುಗಳನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕೆ ಮತ್ತು ಅವುಗಳಿಂದಾಗಬಹುದಾದ ಸಮಸ್ಯೆಗಳನ್ನು ಹಾಗೂ ಸಾವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯುವುದಕ್ಕೆ ವೈದ್ಯರು, ಆರೋಗ್ಯ ಕರ್ಮಿಗಳು ಮತ್ತು ಜನಸಾಮಾನ್ಯರೆಲ್ಲರಿಗೂ ಈ ಸೋಂಕುಗಳನ್ನು ಸರಿಯಾಗಿ, ಸುಲಭವಾಗಿ ಗುರುತಿಸುವುದಕ್ಕೆ ಸಾಧ್ಯವಾಗಬೇಕು.

ಈ ಉದ್ದೇಶದಿಂದ, ಮೊದಲ ಮೂರ್ನಾಲ್ಕು ದಿನಗಳಲ್ಲಿ ಕಂಡುಬರುವ ರೋಗಲಕ್ಷಣಗಳು ಮತ್ತು ಹಳ್ಳಿಗಳಲ್ಲೂ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಭ್ಯವಿರುವ ಸರಳವಾದ ಪರೀಕ್ಷೆಗಳನ್ನಷ್ಟೇ ಬಳಸಿ ಈ ಸೋಂಕುಗಳನ್ನು ಗುರುತಿಸಲು ಸಾಧ್ಯವಾಗುವಂತೆ ಒಂದು ಸರಳವಾದ, ಸುಲಭವಾದ ಬಗೆಯನ್ನು ನಾವಿಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಈ ಸೋಂಕುಗಳು ವರ್ತಿಸುವ ಬಗೆ, ಅವುಗಳ ಆರಂಭಿಕ ಚಿಕಿತ್ಸೆ ಮತ್ತು ಆಸ್ಪತ್ರೆಗೆ ದಾಖಲಿಸಬೇಕಾದ ಕಾರಣಗಳ ಬಗ್ಗೆ ಮುಖ್ಯವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸಾರಾಂಶ:

ಶ್ವಾಸಾಂಗಕ್ಕೆ ಸಂಬಂಧಿಸಿದ ಲಕ್ಷಣಗಳಾದ ವಾಸನೆ, ರುಚಿ ತಿಳಿಯದಾಗುವುದು, ಗಂಟಲು ನೋವು, ನೆಗಡಿ, ಕೆಮ್ಮು ಇದ್ದರೆ, ಜೊತೆಗೆ ಜ್ವರ ಇದ್ದರೆ, ಅಥವಾ ಇಲ್ಲದಿದ್ದರೂ ಕೂಡ, ಅಂಥವರು ಹೊಸ ಕೊರೊನಾ ಸೋಂಕಿನಿಂದ ಬಾಧಿತರಾದವರು ಎಂದು ಪರಿಗಣಿಸಬೇಕು, ಮತ್ತು ಅಂಥವರು ಮನೆಯಲ್ಲೇ ಉಳಿದು ತಮ್ಮ ವೈದ್ಯರಿಗೆ ಅಥವಾ ಸಹಾಯವಾಣಿಗೆ ಕರೆ ಮಾಡಿ ಸೂಕ್ತ ಸಲಹೆಗಳನ್ನು ಪಡೆಯಬೇಕು. ಕೊರೊನಾ ಸೋಂಕಿನ ಈ ಲಕ್ಷಣಗಳಿಲ್ಲದೆ ಜ್ವರವನ್ನು ಹೊಂದಿರುವವರಲ್ಲಿ ಇತರ ಸೋಂಕುಗಳನ್ನು ಪರಿಗಣಿಸಬೇಕು ಮತ್ತು ಅವನ್ನು ಗುರುತಿಸಲು ಅವರ ರೋಗಲಕ್ಷಣಗಳನ್ನು ಪರೀಕ್ಷಿಸಿ, ಇತರ ಪರೀಕ್ಷೆಗಳನ್ನು ನಡೆಸಬೇಕಾಗಬಹುದು. ದೇಹದ ಮೇಲೆ ನವಿರಾದ, ಒತ್ತಿದರೆ ಬಿಳಿಚಿಕೊಳ್ಳುವ ದಡಿಕೆಯಿದ್ದರೆ, ಕಣ್ಣಾಲಿಗಳ ಹಿಂದೆ ನೋವಿದ್ದರೆ ಡೆಂಗೀ ಜ್ವರವಿರಬಹುದು; ಕಣ್ಣುಗಳು ಕೆಂಪಾಗಿ, ಬೆನ್ನು, ಉದರ, ಕೈಕಾಲುಗಳ ಸ್ನಾಯುಗಳಲ್ಲಿ ಬಹಳ ವೇದನೆಯಿದ್ದರೆ ಇಲಿ ಜ್ವರವಿರಬಹುದು. ರಕ್ತದಲ್ಲಿ ಮಲೇರಿಯಾ ಪರೀಕ್ಷೆ, ಬಿಳಿ ರಕ್ತ ಕಣಗಳು ಮತ್ತು ಇಎಸ್‌ಆರ್ ಪರೀಕ್ಷೆ ಮತ್ತು ಮೂತ್ರದ ಪರೀಕ್ಷೆ ನಡೆಸಿದರೆ ಈ ಸೋಂಕುಗಳನ್ನು ಗುರುತಿಸಲು ನೆರವಾಗುತ್ತದೆ: ಇಲಿ ಜ್ವರದಲ್ಲಿ ಬಿಳಿ ಕಣಗಳ ಸಂಖ್ಯೆ ಮತ್ತು ಇಎಸ್‌ಆರ್ ಏರಿಕೆಯಾಗುತ್ತದೆ, ಮೂತ್ರ ಪರೀಕ್ಷೆಯಲ್ಲಿ ವ್ಯತ್ಯಾಸಗಳು ಇದ್ದೇ ಇರುತ್ತವೆ; ಡೆಂಗೀ ಜ್ವರದಲ್ಲಿ ಬಿಳಿ ಕಣಗಳ ಸಂಖ್ಯೆಯು ಸಾಮಾನ್ಯವಾಗಿರುತ್ತದೆ ಅಥವಾ ತುಸು ಕಡಿಮೆಯಾಗಿರುತ್ತದೆ; ಮಲೇರಿಯಾದಲ್ಲಿ ಮಲೇರಿಯಾ ಪರೋಪಜೀವಿಯು ರಕ್ತ ಪರೀಕ್ಷೆಯಲ್ಲಿ ಪತ್ತೆಯಾಗುತ್ತದೆ; ವೈರಲ್ ಹೆಪಟೈಟಿಸ್‌ನಲ್ಲಿ ರಕ್ತದಲ್ಲಿ ಎಎಲ್‌ಟಿ ಮಟ್ಟವು 350ಕ್ಕಿಂತ ಹೆಚ್ಚಿರುತ್ತದೆ.

ರೋಗಲಕ್ಷಣಗಳು
ಹೊಸ ಕೊರೊನಾ ಸೋಂಕು ಈಗ ಲಭ್ಯವಾಗಿರುವ ವರದಿಗಳನುಸಾರ ಶೇ.80-85% ಸೋಂಕಿತರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲದೆ ಅಥವಾ ಅತಿ ಸೌಮ್ಯವಾದ ಲಕ್ಷಣಗಳೊಂದಿಗೆ ನಾಲ್ಕೈದು ದಿನಗಳಲ್ಲಿ ಯಾವ ಚಿಕಿತ್ಸೆಯಾಗಲೀ, ಪರೀಕ್ಷೆಯಾಗಲೀ ಬೇಕಿಲ್ಲದೆ ವಾಸಿಯಾಗುತ್ತದೆ. ಮೂಗಿನಲ್ಲಿ ವಾಸನೆ ತಿಳಿಯದಿರುವುದು, ನಾಲಗೆಯಲ್ಲಿ ರುಚಿ ಹತ್ತದಿರುವುದು, ಗಂಟಲು ನೋವು, ನೆಗಡಿ, ಕೆಮ್ಮು, ತಲೆ ನೋವು, ಮೈಕೈ ನೋವು ಕೊರೊನಾ ಸೋಂಕಿನ ಆರಂಭಿಕ ಲಕ್ಷಣಗಳಾಗಿವೆ. ಕೆಲವರಲ್ಲಿ ಕಣ್ಣು ಕೆಂಪಾಗುವುದನ್ನೂ ಗುರುತಿಸಲಾಗಿದೆ. ಜ್ವರವು ಈ ಆರಂಭಿಕ ಲಕ್ಷಣಗಳು ತೊಡಗಿದಾಗ ಅಥವಾ ಅದಾಗಿ ಎರಡು ಮೂರು ದಿನಗಳ ಬಳಿಕವೂ ಕಾಣಿಸಿಕೊಳ್ಳಬಹುದು, ಕೆಲವರಲ್ಲಿ ಜ್ವರ ಇಲ್ಲದೆಯೂ ಇರಬಹುದು; ಜ್ವರವಿದ್ದ ಕೆಲವರಲ್ಲಿ ಚಳಿ-ನಡುಕಗಳೂ ಇರಬಹುದು. ಕೆಲವರಲ್ಲಿ ಆರಂಭಿಕ ಲಕ್ಷಣವಾಗಿ ಭೇದಿಯೂ ಉಂಟಾಗಬಹುದು.

ಕೊರೊನಾ ಸೋಂಕಿತರಲ್ಲಿ ಹೆಚ್ಚಿನವರು 4-7 ದಿನಗಳಲ್ಲಿ ತಾವಾಗಿ ಗುಣಮುಖರಾಗುತ್ತಾರೆ. ಈಗಾಗಲೇ ಕೊರೊನಾ ಸೋಂಕಿನ ಬಗ್ಗೆ ವಿಶ್ವದ ಹಲವೆಡೆಗಳಿಂದ ವರದಿಗಳು ಲಭ್ಯವಿದ್ದು, ಹೆಚ್ಚಿನವರಲ್ಲಿ ಗಂಭೀರ ಸಮಸ್ಯೆಗಳು ರೋಗಲಕ್ಷಣಗಳು ತೊಡಗಿದ 7-8 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ ಎಂದೂ, ಆಸ್ಪತ್ರೆಗಳಲ್ಲಿ ದಾಖಲಾಗುವವರು ಸರಾಸರಿ ಸುಮಾರು 10-11ನೆ ದಿನದ ಹೊತ್ತಿಗೆ ಆಗುತ್ತಾರೆಂದೂ ಹೇಳಲಾಗಿದೆ. ಅರುವತ್ತೈದು ವರ್ಷಕ್ಕೆ ಮೇಲ್ಪಟ್ಟವರು, ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಮೂತ್ರ ಪಿಂಡಗಳು, ಯಕೃತ್ತು ಅಥವಾ ಶ್ವಾಸಾಂಗದ ದೀರ್ಘ ಕಾಲೀನ ಕಾಯಿಲೆಗಳು, ಕ್ಯಾನ್ಸರ್, ರೋಗರಕ್ಷಣಾ ಶಕ್ತಿ ಕುಂಠಿತವಾಗುಳ್ಳವರು ಕೊರೊನಾ ಸೋಂಕಿನಿಂದ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳು ಹೆಚ್ಚೆನ್ನುವುದು ಈಗ ಸ್ಪಷ್ಟವಾಗಿದೆ ಮತ್ತು ಕೊರೊನಾದಿಂದ ಮೃತ ಪಟ್ಟವರಲ್ಲಿ ಶೇ.90-95ರಷ್ಟು ಜನರು ಆ ಮೊದಲೇ ಒಂದು ಅಥವಾ ಹೆಚ್ಚು ಬಗೆಯ ಕಾಯಿಲೆಗಳನ್ನು ಹೊಂದಿದ್ದವರಾಗಿದ್ದರೆಂದು ಭಾರತವೂ ಸೇರಿದಂತೆ ಹೆಚ್ಚಿನ ಎಲ್ಲಾ ದೇಶಗಳ ವರದಿಗಳೂ ತೋರಿಸಿವೆ.

ಕೊರೊನಾ ವೈರಸ್ ಸುಲಭವಾಗಿ ಹರಡುವಂಥದ್ದಾಗಿದ್ದು, ರೋಗಲಕ್ಷಣಗಳಿಲ್ಲದವರ ನೇರ ಸಂಪರ್ಕಕ್ಕೆ ಬಂದವರಲ್ಲಿ ಕೆಲವರಿಗೂ ಹರಡುವ ಸಾಧ್ಯತೆಗಳಿವೆ ಎಂದೂ, ಅತಿ ಗಂಭೀರವಾದ ಸೋಂಕುಳ್ಳವರಿಂದ ಅತಿ ಹೆಚ್ಚು ಮಟ್ಟದಲ್ಲಿ, ಅತಿ ಹೆಚ್ಚು ದಿನಗಳ ಕಾಲ ಹರಡುತ್ತದೆ ಎಂದೂ ಹೇಳಲಾಗಿದೆ. ಉಸಿರಾಡುವ ಗಾಳಿಯಿಂದ ಕೊರೊನಾ ಸೋಂಕು ಹರಡುತ್ತದೆನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲ.

ಇವನ್ನೆಲ್ಲ ಪರಿಗಣಿಸಿ, ಕೊರೊನಾ ಸೋಂಕಿನ ಲಕ್ಷಣಗಳಿದ್ದವರು, ಅಂದರೆ ವಾಸನೆ, ರುಚಿ ತಿಳಿಯದಂತಾಗುವುದು, ಗಂಟಲು ನೋವು, ನೆಗಡಿ, ಕೆಮ್ಮು, ಜ್ವರ ಉಳ್ಳವರು ಮನೆಯಲ್ಲೇ ಉಳಿದು ತಮ್ಮ ವೈದ್ಯರನ್ನು ಅಥವಾ ಸಹಾಯವಾಣಿಯನ್ನು (14410) ಸಂಪರ್ಕಿಸಿ ಅವರ ಸಲಹೆಯನ್ನು ಪಡೆಯಬೇಕು; ಅಂಥವರಿಗೆ ಆರಂಭದ ಹಂತದಲ್ಲಿ ಯಾವುದೇ ಪರೀಕ್ಷೆ ಅಥವಾ ಚಿಕಿತ್ಸೆ ಅಗತ್ಯವಿಲ್ಲದಿರುವುದರಿಂದ ಅವರು ವೈದ್ಯರ ಬಳಿಗೋ, ಆಸ್ಪತ್ರೆಗೋ ಹೋದರೆ ಸೋಂಕು ಹರಡಲು ಕಾರಣರಾಗುತ್ತಾರೆಯೇ ಹೊರತು ಯಾವ ಪ್ರಯೋಜನವೂ ಆಗುವುದಿಲ್ಲ. ಹೀಗೆ ಮನೆಯಲ್ಲಿ ಉಳಿದವರಲ್ಲಿ ಜ್ವರ ಹೆಚ್ಚತೊಡಗಿದರೆ, ಕೆಮ್ಮು ಉಲ್ಬಣಿಸಿದರೆ ಅಥವಾ ಉಸಿರಾಟಕ್ಕೆ ಕಷ್ಟವೆನಿಸಿದರೆ ಅವರು ಆ ಕೂಡಲೇ ಮತ್ತೆ ತಮ್ಮ ವೈದ್ಯರನ್ನು ಅಥವಾ ಸಹಾಯವಾಣಿಯನ್ನು ಸಂಪರ್ಕಿಸಿ ನೆರವನ್ನು ಕೇಳಬೇಕು. ಹಾಗೆಯೇ, ಕೊರೊನಾ ಸೋಂಕು ಗಂಭೀರವಾಗುವ ಆಪಾಯವುಳ್ಳವರೂ ಕೂಡ ನಿಗಾವಣೆಯಲ್ಲಿರಬೇಕು. ಇವರೆಲ್ಲರನ್ನು ಮನೆಗಳಲ್ಲೇ ಪರೀಕ್ಷಿಸುವುದಕ್ಕೆ ಸಂಚಾರಿ ಘಟಕಗಳನ್ನು ಏರ್ಪಡಿಸಿದರೆ ಒಳ್ಳೆಯದು. ಈ ಘಟಕಗಳು ಸೋಂಕಿತರನ್ನು ಪರೀಕ್ಷಿಸಿ, ಪಲ್ಸ್ ಆಕ್ಸಿಮೀಟರ್ ಎಂಬ ಸರಳ ಸಾಧನದ ಮೂಲಕ ಅವರ ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಅಳೆಯಬಹುದು. ತೀವ್ರವಾದ ರೋಗಲಕ್ಷಣಗಳಿದ್ದರೆ, ಆಮ್ಲಜನಕದ ಪ್ರಮಾಣವು 94% ಅಥವಾ ಕಡಿಮೆಯಿದ್ದರೆ, ಅಥವಾ 6 ನಿಮಿಷ ನಡೆದಾಡಿಸಿ ಪರೀಕ್ಷಿಸಿದಾಗ ≤94%ಕ್ಕೆ ಇಳಿದರೆ, ನಾಡಿಯ ಗತಿ 100ಕ್ಕಿಂತ ಹೆಚ್ಚಿದ್ದರೆ, ಉಸಿರಾಟದ ಗತಿ 20ಕ್ಕಿಂತ ಹೆಚ್ಚಿದ್ದರೆ ಆಸ್ಪತ್ರೆಗೆ ದಾಖಲಿಸಬೇಕು.

ಡೆಂಗಿ ಮತ್ತು ಇಲಿ ಜ್ವರಗಳೆರಡರಲ್ಲೂ ಜ್ವರ, ಮೈಕೈ ನೋವು ಮತ್ತು ತಲೆ ನೋವು ಸಾಮಾನ್ಯವಾಗಿರುತ್ತವೆ. ಡೆಂಗಿಯಲ್ಲಿ ಕಣ್ಣಾಲಿಗಳ ಹಿಂಭಾಗದಲ್ಲಿ ನೋವು ಸಾಮಾನ್ಯವಾಗಿ ಕಂಡು ಬರುತ್ತದೆ. ಇಲಿ ಜ್ವರದಲ್ಲಿ ಬೆನ್ನು, ಹೊಟ್ಟೆ ಮತ್ತು ಕಾಲಿನ ಸ್ನಾಯುಗಳಲ್ಲಿ ವಿಪರೀತ ನೋವಿರುತ್ತದೆ, ಆ ಸ್ನಾಯುಗಳನ್ನು ಒತ್ತಿದಾಗ ನೋವು ಹೆಚ್ಚಾಗುತ್ತದೆ. ಡೆಂಗಿ ಜ್ವರದಲ್ಲಿ ಮೊದಲ ಮೂರು ದಿನಗಳಲ್ಲಿ ಜ್ವರವಿದ್ದು, ನಂತರ ಒಂದೆರಡು ದಿನ ಜ್ವರ ಬಿಟ್ಟು, ಮತ್ತೆ ಒಂದೆರಡು ದಿನ ಜ್ವರವಿರುತ್ತದೆ, ಹೆಚ್ಚಿನವರಲ್ಲಿ ಯಾವ ಸಮಸ್ಯೆಗಳೂ ಆಗದೆ ಆರೇಳು ದಿನಗಳಲ್ಲಿ ಕಾಯಿಲೆಯು ವಾಸಿಯಾಗುತ್ತದೆ. ಕೆಲವರಲ್ಲಿ ಮೂರು-ನಾಲ್ಕನೇ ದಿನಗಳಲ್ಲಿ, ಜ್ವರ ಬಿಟ್ಟಿದ್ದಾಗ, ರಕ್ತದ್ರವವು ಸೋರಿಕೆಯಾಗುವುದು ಬಹಳಷ್ಟಾದರೆ ರಕ್ತಸ್ರಾವ ಅಥವಾ ರಕ್ತದೊತ್ತಡದಲ್ಲಿ ಇಳಿಕೆಯಂತಹ ಸಮಸ್ಯೆಗಳಾಗಬಹುದು; ಡೆಂಗಿ ಪೀಡಿತರಲ್ಲಿ ರಕ್ತದ ಹಿಮೋಗ್ಲೋಬಿನ್ ಅಥವಾ ಪಿಸಿವಿ ಪ್ರಮಾಣವು ಸಾಮಾನ್ಯ ಮಟ್ಟಕ್ಕಿಂತ 20%ಕ್ಕಿಂತ ಹೆಚ್ಚು ಏರಿಕೆಯಾಗಿದ್ದರೆ ತೀವ್ರ ಪ್ರಮಾಣದ ರಕ್ತದ್ರವ ಸೋರಿಕೆಯನ್ನು ಸೂಚಿಸುತ್ತದೆ. ಅಂಥ ಸಮಸ್ಯೆಗಳಾದವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ.

ಇಲಿ ಜ್ವರದಲ್ಲೂ ಜ್ವರವು ಎರಡು ಹಂತಗಳಲ್ಲಿ ಉಂಟಾಗುತ್ತದೆ; ಮೊದಲ ಹಂತದಲ್ಲಿ ಜ್ವರ, ಮೈಕೈ ನೋವು, ತಲೆ ನೋವು ಮುಂತಾದ ಸಾಮಾನ್ಯ ಲಕ್ಷಣಗಳು ಸುಮಾರು 2-9 ದಿನಗಳಿದ್ದು, ಎರಡನೇ ಹಂತದಲ್ಲಿ ಕೆಲದಿನಗಳ ಬಳಿಕ ಮತ್ತೆ ಜ್ವರವು ತೊಡಗಿ ಅದರ ಜೊತೆಗೆ ಯಕೃತ್ತಿನ ಸಮಸ್ಯೆಯಾಗಿ ಕಾಮಾಲೆ, ಮೂತ್ರಪಿಂಡಗಳ ವೈಫಲ್ಯ, ಕೆಮ್ಮಿನಲ್ಲಿ ರಕ್ತ, ಕರುಳಿನಿಂದ ರಕ್ತಸ್ರಾವ, ಮಿದುಳುಪೊರೆಯ ಉರಿಯೂತ ಮುಂತಾದ ಗಂಭೀರ ಸಮಸ್ಯೆಗಳು ಕಂಡುಬರಬಹುದು.

ಮಲೇರಿಯಾದಲ್ಲಿ ಜ್ವರ ಹಾಗೂ ತಲೆ ನೋವು ಸಾಮಾನ್ಯವಾಗಿದ್ದು, ಮೊದಲ ದಿನಗಳಲ್ಲಿ ಆಗಾಗ, ದಿನವಿಡೀ ಜ್ವರವಿದ್ದು, ನಂತರ ಎರಡು ದಿನಗಳಿಗೊಮ್ಮೆ ಚಳಿ ಸಹಿತ ಜ್ವರವುಂಟಾಗಬಹುದು. ಕೆಲವರಲ್ಲಿ, ಅದರಲ್ಲೂ ವೈವಾಕ್ಸ್ ಮಲೇರಿಯಾದಲ್ಲಿ, ಒಣ ಕೆಮ್ಮು ಕಂಡುಬರಬಹುದು. ರಕ್ತ ಪರೀಕ್ಷೆಯಲ್ಲಿ ಮಲೇರಿಯಾ ದೃಢಗೊಂಡು ಮಲೇರಿಯಾ ನಿರೋಧಕ ಚಿಕಿತ್ಸೆಯನ್ನು ಆರಂಭಿಸಿದ 48 ಗಂಟೆಗಳಲ್ಲಿ ಜ್ವರವು ಶಮನವಾಗುತ್ತದೆ.

ವೈರ‌ಸ್‌ಗಳಿಂದ ಉಂಟಾಗುವ ಯಕೃತ್ತಿನ ಉರಿಯೂತ, ಅಥವಾ ವೈರಲ್ ಹೆಪಟೈಟಿಸ್‌ನಲ್ಲಿ, ಜ್ವರದ ಜೊತೆಗೆ ವಾಕರಿಕೆ/ವಾಂತಿಗಳು ಸಾಮಾನ್ಯವಾಗಿರುತ್ತವೆ; ನಾಲ್ಕಾರು ದಿನಗಳಲ್ಲಿ ಈ ಲಕ್ಷಣಗಳು ಕಡಿಮೆಯಾಗುತ್ತಿದ್ದಂತೆ ಕಾಮಾಲೆ ಹೆಚ್ಚಾಗತೊಡಗಿ ಮೂತ್ರ ಮತ್ತು ಕಣ್ಣುಗಳು ಹಳದಿಯಾಗುತ್ತವೆ.

ಚರ್ಮದ ದಡಿಕೆಗಳು

ಡೆಂಗಿ ಜ್ವರದಲ್ಲಿ ದಡಿಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಮೊದಲ ದಿನಗಳಲ್ಲಿ ನವಿರಾದ, ಕೆಂಪಗಿನ ದಡಿಕೆಗಳು ಕೈ-ಕಾಲು, ಮೈಮೇಲೆ ಮೂಡುತ್ತವೆ, ಒತ್ತಿದಾಗ ಬಿಳಿಚಿಕೊಳ್ಳುತ್ತವೆ; ಮೂರ್ನಾಲ್ಕು ದಿನಗಳ ಬಳಿಕ, ಇನ್ನಷ್ಟು ಗಾಢವಾದ ದಡಿಕೆಗಳೆದ್ದು, ನಡುನಡುವೆ ದಡಿಕೆಯಿಲ್ಲದ ಚರ್ಮವು ದ್ವೀಪಗಳಂತೆ (ಕೆಂಪಗಿನ ಸಮುದ್ರದಲ್ಲಿ ಬಿಳಿ ದ್ವೀಪಗಳು) ಕಂಡುಬರುತ್ತದೆ.

ಡೆಂಗಿ ಜ್ವರದಲ್ಲಿ ದಡಿಕೆಗಳು

ಹೊಸ ಕೊರೊನಾ ಸೋಂಕಿನಲ್ಲೂ ಕೆಲವರಲ್ಲಿ, ಹೆಚ್ಚಾಗಿ ಕಿರಿಯ ವಯಸ್ಕರಲ್ಲಿ, ಚರ್ಮದ ದಡಿಕೆಗಳುಂಟಾಗುವುದು ವರದಿಯಾಗಿವೆ. ಮೊದಲ ದಿನಗಳಲ್ಲಿ ಕೆಂಪಗಿನ ದಡಿಕೆಗಳು, ತುರಿಕೆಯುಳ್ಳ ದಡಿಕೆಗಳು, ಮತ್ತು ಕೋಟಲೆಯಲ್ಲಿ ಉಂಟಾಗುವಂತೆ ನೀರು ತುಂಬಿದ ಗುಳ್ಳೆಗಳು ಕಂಡುಬರಬಹುದು. ಐದಾರು ದಿನಗಳ ಬಳಿಕ ಕೆಲವರಲ್ಲಿ ಕೈ-ಕಾಲುಗಳ ಬೆರಳ ತುದಿಗಳಲ್ಲಿ ರಕ್ತನಾಳಗಳಲ್ಲಿ ಸಮಸ್ಯೆಯಾಗಿ ಕೆಂಪಗಿನ ಚುಕ್ಕೆಗಳು ಮೂಡುವುದನ್ನು ಗಮನಿಸಲಾಗಿದ್ದು, ಹಾಗಿದ್ದವರಲ್ಲಿ ಕೊರೊನಾ ಸೋಂಕು ಹೆಚ್ಚು ತೀವ್ರವಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕೊರೊನಾ ಸೋಂಕಿನಲ್ಲಿ ದಡಿಕೆಗಳು

ಇಲಿ ಜ್ವರದ ಮೊದಲ ಹಂತದಲ್ಲಿ ಕಣ್ಣೆದುರಲ್ಲಿದ್ದು ಮಾಯವಾಗುವ, 24 ಗಂಟೆಗೂ ಕಡಿಮೆ ಹೊತ್ತು ಉಳಿಯುವ ದಡಿಕೆಗಳು, ಬಾಯೊಳಗಿನ ಅಂಗುಳಿನಲ್ಲಿ ಕೆಂಪಗಿನ ದಡಿಕೆಗಳು ಉಂಟಾಗಬಹುದು. ಎರಡನೇ ಹಂತದಲ್ಲಿ ತೀವ್ರತರದ ಕಾಯಿಲೆಯಿದ್ದವರಲ್ಲಿ ಚರ್ಮದಡಿಯಲ್ಲಿ ರಕ್ತಸ್ರಾವವಾಗಿ ದಡಿಕೆಗಳು ಗೋಚರಿಸಬಹುದು.

ಮಲೇರಿಯಾ ಹಾಗೂ ವೈರಲ್ ಹೆಪಟೈಟಿಸ್‌ಗಳಲ್ಲಿ ದಡಿಕೆಗಳಿರುವುದಿಲ್ಲ, ಅಥವಾ ಅತಿ ಅಪರೂಪವಾಗಿರುತ್ತವೆ.

ಕಣ್ಣುಗಳು

ಇಲಿ ಜ್ವರದಲ್ಲಿ ಆರಂಭದ ಹಂತದಲ್ಲೇ ಕಣ್ಣೊಳಗೆ ಕೆಂಪಾಗಿ ಊದಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತದೆ; ಕೆಲವರಲ್ಲಿ ಕಣ್ಣಿನಲ್ಲಿ ರಕ್ತಸ್ರಾವವೂ ಕಂಡುಬರಬಹುದು. ಡೆಂಗಿ ಜ್ವರದಲ್ಲೂ ಕಣ್ಣಿನಲ್ಲಿ ರಕ್ತಸ್ರಾವವು ಕಂಡುಬರಬಹುದು. ಹೊಸ ಕೊರೊನಾ ಸೋಂಕಿನಲ್ಲಿ ಕೆಲವರಲ್ಲಿ ಆರಂಭದಲ್ಲಿ, ಜ್ವರಕ್ಕೆ ಮೊದಲೇ, ಕಣ್ಣು ಕೆಂಪಾಗುವುದನ್ನು ಗುರುತಿಸಲಾಗಿದೆ.

ವೈರಲ್ ಹೆಪಟೈಟಿಸ್‌ನಲ್ಲಿ ಮತ್ತು ತೀವ್ರ ರೂಪದ ಮಲೇರಿಯಾ ಹಾಗೂ ಇಲಿ ಜ್ವರಗಳಲ್ಲಿ ಕಾಮಾಲೆಯಿಂದ ಕಣ್ಣು ಹಳದಿ ಬಣ್ಣಕ್ಕೆ ತಿರುಗಬಹುದು.

ರಕ್ತ-ಮೂತ್ರ ಪರೀಕ್ಷೆಗಳು

ಬಿಳಿ ರಕ್ತಕಣಗಳ ಸಂಖ್ಯೆ

ಇಲಿ ಜ್ವರವುಳ್ಳ ಹೆಚ್ಚಿನವರಲ್ಲಿ ಬಿಳಿ ರಕ್ತಕಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ, ಅದರಲ್ಲೂ ನಡುಬಣ್ಣದ ಕಣಗಳು ವಿಶೇಷವಾಗಿ ಏರುತ್ತವೆ (neutrophilia). ಡೆಂಗಿ, ಮಲೇರಿಯಾ, ಕೊರೊನಾ ಸೋಂಕು ಮತ್ತು ವೈರಲ್ ಹೆಪಟೈಟಿಸ್‌ಗಳಲ್ಲಿ ಬಿಳಿ ರಕ್ತಕಣಗಳ ಸಂಖ್ಯೆಯು ಸಾಮಾನ್ಯ ಮಟ್ಟದಲ್ಲಿರುತ್ತದೆ ಅಥವಾ ಕಡಿಮೆಯೇ ಆಗುತ್ತದೆ.

ಹೊಸ ಕೊರೊನಾ ಸೋಂಕಿನಲ್ಲಿ ದುಗ್ಧ ಕಣಗಳಲ್ಲಿ ಇಳಿಕೆ (Lymphopenia) ಆಗುವುದನ್ನು ಗುರುತಿಸಲಾಗಿದ್ದು, ಅದು <20% ಅಥವಾ <1000/ಮಿಮಿ3 ಇದ್ದರೆ ಗಂಭೀರ ಕಾಯಿಲೆಯ ಸೂಚನೆಯಾಗಿರಬಹುದು ಎನ್ನಲಾಗಿದೆ.

ಹಿಮೋಗ್ಲೋಬಿನ್ ಪ್ರಮಾಣ

ಡೆಂಗಿ ಜ್ವರದ ತೀವ್ರತೆಯನ್ನು ಅಂದಾಜಿಸುವುದಕ್ಕೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣದ ಪರೀಕ್ಷೆಯನ್ನು ಬಳಸಬಹುದು. ಡೆಂಗಿ ಜ್ವರದಲ್ಲಿ ಕಿರು ರಕ್ತನಾಳಗಳಲ್ಲಿ ಸಮಸ್ಯೆಯಾಗಿ ರಕ್ತದ್ರವವು ರಕ್ತನಾಳಗಳಿಂದ ಅಂಗಾಂಶಗಳೊಳಕ್ಕೆ ಸೋರಿಕೆಯಾಗುತ್ತದೆ; ಹಾಗಾದಾಗ ರಕ್ತದೊಳಗೆ ಹಿಮೋಗ್ಲೋಬಿನ್ ಪ್ರಮಾಣವು ಏರತೊಡಗುತ್ತದೆ. ಡೆಂಗಿ ಪೀಡಿತರಲ್ಲಿ ಕಾಯಿಲೆಯ 3ನೇ ಅಥವಾ 4ನೇ ದಿನಗಳಲ್ಲಿ ಹಿಮೋಗ್ಲೋಬಿನ್/ಪಿಸಿವಿ ಪ್ರಮಾಣವು ವ್ಯಕ್ತಿಯ ವಯಸ್ಸು/ಲಿಂಗಕ್ಕೆ ಅನುಗುಣವಾದ ಸಾಮಾನ್ಯ ಮಟ್ಟಕ್ಕಿಂತ ಅಥವಾ ಆ ವ್ಯಕ್ತಿಯಲ್ಲಿ ಮೊದಲಿದ್ದ ಮಟ್ಟಕ್ಕಿಂತ 20% ಅಥವಾ ಇನ್ನೂ ಹೆಚ್ಚಾದರೆ ಗಣನೀಯವಾದ ಮಟ್ಟದಲ್ಲಿ ರಕ್ತದ್ರವದ ಸೋರಿಕೆಯಾಗಿರುವುದನ್ನು ಸೂಚಿಸುತ್ತದೆ. ಡೆಂಗಿ ಪೀಡಿತರಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ಏರುವ ಬದಲು ಒಮ್ಮಿಂದೊಮ್ಮೆಗೇ ಕಡಿಮೆಯಾಗತೊಡಗಿ, ಜೊತೆಗೆ ರಕ್ತದಲ್ಲಿ ಎಎಲ್‌ಟಿ ಪ್ರಮಾಣವೂ ಹೆಚ್ಚಿ, ಜ್ವರವೂ ಏರತೊಡಗಿದರೆ ಅಪರೂಪದ ಸಮಸ್ಯೆಯಾದ ಹಿಮೋಫಾಗೊಸೈಟಿಕ್ ಲಿಂಫೋ ಹಿಸ್ಟಿಯೋಸೈಟೋಸಿಸ್ (ರೋಗರಕ್ಷಣೆಯ ಕಣಗಳೇ ರಕ್ತಕಣಗಳನ್ನು ಭಕ್ಷಿಸುವ ಸಮಸ್ಯೆ) ಉಂಟಾಗಿರುವ ಸಾಧ್ಯತೆಯನ್ನು ಪರಿಗಣಿಸಬೇಕಾಗುತ್ತದೆ. ಇಂತೆಲ್ಲ ಸಮಸ್ಯೆಗಳಾಗುವ ಡೆಂಗಿ ಪೀಡಿತರನ್ನು ಕೂಡಲೇ ಆಸ್ಪತ್ರೆಗಳಿಗೆ ದಾಖಲಿಸಿ, ವೈದ್ಯಕೀಯ ಅಥವಾ ರಕ್ತ ತಜ್ಞರ ಸಲಹೆಯನ್ನು ಒದಗಿಸಬೇಕು.

ಮಲೇರಿಯಾ ಗಂಭೀರವಾದವರಲ್ಲೂ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾಗಬಹುದಾಗಿದ್ದು, ರಕ್ತ ಮರುಪೂರಣದ ಅಗತ್ಯವುಂಟಾಗಬಹುದು.

ಹೊಸ ಕೊರೊನಾ ಸೋಂಕು ಮತ್ತು ವೈರಲ್ ಹೆಪಟೈಟಿಸ್‌ಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ಸಾಮಾನ್ಯವಾಗಿಯೇ ಇರುತ್ತದೆ. ಇಲಿ ಜ್ವರದಲ್ಲಿ ರಕ್ತಸ್ರಾವವಾದರೆ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾಗಬಹುದು.

ಪ್ಲೇಟ್ಲೆಟ್ ಕಣಗಳು

ಡೆಂಗಿ, ಮಲೇರಿಯಾ ಮತ್ತು ಇಲಿ ಜ್ವರಗಳೆಲ್ಲದರಲ್ಲಿ ಪ್ಲೇಟ್ಲೆಟ್ ಕಣಗಳ ಸಂಖ್ಯೆಯು ಗಣನೀಯವಾಗಿ ಇಳಿಯುತ್ತದೆ ಮತ್ತು ಅಂತಹಾ ಇಳಿಕೆಯ ಆಧಾರದಲ್ಲಿ ಸೋಂಕಿನ ತೀವ್ರತೆಯನ್ನು ಅಂದಾಜಿಸಲು ಸಾಧ್ಯವಿಲ್ಲ. ಹೊಸ ಕೊರೊನಾ ಸೋಂಕು ಮತ್ತು ವೈರಲ್ ಹೆಪಟೈಟಿಸ್‌ಗಳಲ್ಲಿ ಪ್ಲೇಟ್ಲೆಟ್ ಕಣಗಳ ಸಂಖ್ಯೆಯು ಸಾಮಾನ್ಯ ಮಟ್ಟದಲ್ಲೇ ಇರುತ್ತದೆ.

ಇಎಸ್ಆರ್ ಪರೀಕ್ಷೆ

ರಕ್ತದಲ್ಲಿ ಇಎಸ್ಆರ್ ಪರೀಕ್ಷೆಯನ್ನು ನಡೆಸಿದಾಗ, ಇಲಿ ಜ್ವರದಲ್ಲಿ ಅದರ ಮಟ್ಟವು ಸಾಕಷ್ಟು ಏರಿಕೆಯಾಗಿರುವುದು (>60ಮಿಮಿ) ಕಂಡುಬರುತ್ತದೆ. ಹೊಸ ಕೊರೊನಾ, ಮಲೇರಿಯಾ, ಡೆಂಗಿ ಮತ್ತು ವೈರಲ್ ಹೆಪಟೈಟಿಸ್‌ಗಳಲ್ಲಿ ಆರಂಭದ ಹಂತಗಳಲ್ಲಿ ಇಎಸ್ಆರ್ ಮಟ್ಟವು ಸಾಮಾನ್ಯವಾಗಿಯೇ ಇರುತ್ತದೆ ಅಥವಾ ತುಸು ಹೆಚ್ಚಿರಬಹುದು.

ಮೂತ್ರ ಪರೀಕ್ಷೆ:

ಇಲಿ ಜ್ವರವುಳ್ಳವರ ಮೂತ್ರದಲ್ಲಿ ಆಲ್ಬುಮಿನ್, ಬಿಳಿ ರಕ್ತ ಕಣಗಳು ಮತ್ತು ಕೆಂಪು ರಕ್ತ ಕಣಗಳ ವಿಸರ್ಜನೆಯು ಹೆಚ್ಚುವುದು ಇದ್ದೇ ಇರುತ್ತದೆ. ಹೊಸ ಕೊರೊನಾ, ಮಲೇರಿಯಾ ಮತ್ತು ಡೆಂಗಿ ಜ್ವರಗಳಲ್ಲಿ ಮೂತ್ರದ ಪರೀಕ್ಷೆಯು ಸಾಮಾನ್ಯವಾಗಿರುತ್ತದೆ, ಆದರೆ ಅವುಗಳಲ್ಲಿ ನಾಲ್ಕೈದು ದಿನಗಳ ಬಳಿಕ ತೀವ್ರ ಸಮಸ್ಯೆಗಳಾದರೆ ಮೂತ್ರದಲ್ಲೂ ವ್ಯತ್ಯಾಸಗಳು ಕಂಡುಬರಬಹುದು. ವೈರಲ್ ಹೆಪಟೈಟಿಸ್‌ ಉಳ್ಳವರಲ್ಲಿ ಕಾಮಾಲೆ ಹೆಚ್ಚತೊಡಗಿದಂತೆ ಮೂತ್ರದಲ್ಲಿ ಯೂರೋಬಿಲಿನೋಜನ್ ಮತ್ತು ಬಿಲಿರುಬಿನ್ ವಿಸರ್ಜನೆಯು ಹೆಚ್ಚತೊಡಗುತ್ತದೆ.

ಎಎಲ್‌ಟಿ ಪ್ರಮಾಣ

ರಕ್ತದಲ್ಲಿ ಎಎಲ್‌ಟಿ ಎಂಬ ಯಕೃತ್ತಿನ ಕಿಣ್ವದ ಪ್ರಮಾಣವು ವೈರಲ್ ಹೆಪಟೈಟಿಸ್‌ನಲ್ಲಿ ಗಣನೀಯವಾಗಿ ಏರುತ್ತದೆ, 350ಕ್ಕಿಂತ ಹೆಚ್ಚೇ ಇರುತ್ತದೆ. ಹೊಸ ಕೊರೊನಾ, ಡೆಂಗಿ, ಮಲೇರಿಯಾ ಹಾಗೂ ಇಲಿ ಜ್ವರಗಳಲ್ಲಿ ಎಎಲ್‌ಟಿ ಪ್ರಮಾಣವು ಸಾಮಾನ್ಯವಾಗಿರುತ್ತದೆ ಅಥವಾ ಸ್ವಲ್ಪ ಮಟ್ಟಿಗೆ ಏರುತ್ತದೆ.

ಮಲೇರಿಯಾ ಪರೀಕ್ಷೆ

ಹೊಸ ಕೊರೊನಾದ ಲಕ್ಷಣಗಳಿಲ್ಲದ ಜ್ವರ ಪೀಡಿತರಲ್ಲಿ ಮಲೇರಿಯಾಕ್ಕಾಗಿ ರಕ್ತದ ಪರೀಕ್ಷೆಯನ್ನು ಮಾಡುವುದು ಅಪೇಕ್ಷಣೀಯವಾಗಿದೆ. ಮಲೇರಿಯಾ ಸೋಂಕಿದ್ದರೆ ರಕ್ತದಲ್ಲಿ ಮಲೇರಿಯಾ ಪರೋಪಜೀವಿಗಳು ಕಾಣಸಿಗುತ್ತವೆ.

ಆರಂಭಿಕ ಚಿಕಿತ್ಸೆ ಮತ್ತು ಆಸ್ಪತ್ರೆಗೆ ದಾಖಲಿಸಲು ಕಾರಣಗಳು

ಹೊಸ ಕೊರೊನಾ ಸೋಂಕಿನ ಲಕ್ಷಣಗಳಿರುವ ಎಲ್ಲರೂ ತಮ್ಮ ಮನೆಗಳಲ್ಲೇ ಉಳಿಯಬೇಕು; ಅವರು ಹೊರಹೋದರೆ ಸಮುದಾಯದಲ್ಲಿ ಸೋಂಕು ಹರಡಲು ಕಾರಣರಾಗುವುದರಿಂದ ಅವರು ಮನೆಯಲ್ಲೇ ಉಳಿಯುವುದು ಬಹು ಅಗತ್ಯದ ಕ್ರಮವಾಗಿದೆ. ಮನೆಯೊಳಗೂ ಆವರು ತಮ್ಮ ಕುಟುಂಬದ ಸದಸ್ಯರಿಂದ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಅವರಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಶೇ. 95ಕ್ಕೂ ಹೆಚ್ಚು ಸೋಂಕಿತರಲ್ಲಿ ಕೊರೊನಾ ಕಾಯಿಲೆಯು ಯಾವುದೇ ಸಮಸ್ಯೆಯನ್ನುಂಟು ಮಾಡದೆ ತಾನಾಗಿ ವಾಸಿಯಾಗುವುದರಿಂದ ಅವರೆಲ್ಲರೂ ಮನೆಯಲ್ಲೇ ಉಳಿದು, ಹೆಚ್ಚು ಜ್ವರವಿದ್ದರೆ ಅದನ್ನು ಕಡಿಮೆ ಮಾಡುವುದಕ್ಕೆ ಪಾರಸಿಟಮಾಲ್ ಮಾತ್ರೆಯನ್ನು ಬಳಸಿದರೆ ಸಾಕಾಗುತ್ತದೆ. ರಕ್ತದಲ್ಲಿ ಆಮ್ಲಜನಕದ ಮಟ್ಟವು 94% ಅಥವಾ ಅದಕ್ಕಿಂತ ಕಡಿಮೆಯಿದ್ದರೆ, 6 ನಿಮಿಷ ನಡೆದಾಗ ರಕ್ತದಲ್ಲಿ ಆಮ್ಲಜನಕದ ಮಟ್ಟವು 94% ಅಥವಾ ಅದಕ್ಕಿಂತ ಕಡಿಮೆಯಾದರೆ, ಮತ್ತು ಗಂಭೀರವಾದ ಸಮಸ್ಯೆಗಳಾಗುವ ಸಾಧ್ಯತೆಗಳುಳ್ಳ 60 ವರ್ಷಕ್ಕೆ ಮೇಲ್ಪಟ್ಟವರು, ರಕ್ತದ ಏರೊತ್ತಡವುಳ್ಳವರು, ಸಕ್ಕರೆ ಕಾಯಿಲೆಯುಳ್ಳವರು, ಶ್ವಾಸಕೋಶಗಳ ಕಾಯಿಲೆಯುಳ್ಳವರು, ಯಕೃತ್ತು ಹಾಗೂ ಮೂತ್ರಪಿಂಡಗಳ ಗಂಭೀರ ಕಾಯಿಲೆಯುಳ್ಳವರು, ಕ್ಯಾನ್ಸರ್ ಪೀಡಿತರು, ರೋಗರಕ್ಷಣಾ ವ್ಯವಸ್ಥೆಯ ಸಮಸ್ಯೆಯುಳ್ಳವರು ಆಸ್ಪತ್ರೆಗೆ ದಾಖಲಾಗಬೇಕಾಗಬಹುದು.

ಡೆಂಗಿ ಜ್ವರವು ಕೂಡ ಹೆಚ್ಚಿನವರಲ್ಲಿ ಸೌಮ್ಯ ರೂಪದಲ್ಲಿದ್ದು ವಾರದೊಳಗೆ ತಾನಾಗಿ ವಾಸಿಯಾಗುತ್ತದೆ; ಜ್ವರವು ವಿಪರೀತವಾಗಿದ್ದರಷ್ಟೇ ಪಾರಸಿಟಮಾಲ್ ಮಾತ್ರೆಯನ್ನು ಬಳಸಬಹುದು. ವಿಪರೀತವಾದ ಬಳಲಿಕೆ, ಏರುತ್ತಿರುವ ಜ್ವರ, ಎಡೆಬಿಡದ ವಾಂತಿ, ನಿಂತಾಗ ತಲೆ ಸುತ್ತಿ ಬವಳಿ ಬಂದಂತಾಗುವುದು, ರಕ್ತಸ್ರಾವ ಮುಂತಾದ ಲಕ್ಷಣಗಳಿದ್ದರೆ, ಹಾಗೂ ಮೇಲೆ ಹೇಳಿದಂತೆ ಹಿಮೋಗ್ಲೋಬಿನ್‌ ಮಟ್ಟದಲ್ಲಿ ಶೇ. 20ಕ್ಕಿಂತ ಹೆಚ್ಚು ಏರಿಕೆ ಅಥವಾ ಒಮ್ಮಿಂದೊಮ್ಮೆಗೇ ಇಳಿಕೆಯಾದರೆ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ.

ಮಲೇರಿಯಾ ಸೋಂಕು ದೃಢಪಟ್ಟವರೆಲ್ಲರೂ ಸೂಕ್ತವಾದ ಮಲೇರಿಯಾ ನಿರೋಧಕ ಚಿಕಿತ್ಸೆಯನ್ನು ಪಡೆಯಬೇಕು. ಎಡೆಬಿಡದ ವಾಂತಿಯಿದ್ದರೆ, ತೀವ್ರವಾದ ಮಲೇರಿಯಾದ ಲಕ್ಷಣಗಳಿದ್ದರೆ (ಪ್ರಜ್ಞಾಹೀನತೆ, ಉಸಿರಾಟದ ಸಮಸ್ಯೆ, ಮೂತ್ರಪಿಂಡಗಳ ವೈಫಲ್ಯ, ರಕ್ತಹೀನತೆ, ಇತ್ಯಾದಿ) ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ.

ಇಲಿ ಜ್ವರವು ಮೊದಲನೇ ಹಂತದಲ್ಲಿ ಹೆಚ್ಚಿನವರಲ್ಲಿ ಸಾಮಾನ್ಯ ಜ್ವರದಂತೆ ಹೋಗಿಬಿಡುತ್ತದೆ. ಇಲಿ ಜ್ವರವು ವ್ಯಾಪಕವಾಗಿರುವ ಪ್ರದೇಶದಲ್ಲಿ ಮೊದಲ ಹಂತದಲ್ಲೂ ಅದು ಗುರುತಿಸಲ್ಪಟ್ಟರೆ ಅಂಥ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಬಹುದು: ಗರ್ಭಿಣಿಯರಲ್ಲದ ವಯಸ್ಕರಿಗೆ ಡಾಕ್ಸಿಸೈಕ್ಲಿನ್ 100ಮಿಗ್ರಾಂ ದಿನಕ್ಕೆರಡು ಸಲದಂತೆ ಒಂದು ವಾರ ಕೊಡಬೇಕು; ಗರ್ಭಿಣಿಯರಿಗೆ ಮತ್ತು ಹಾಲೂಡಿಸುವ ತಾಯಂದಿರಿಗೆ ಆಂಪಿಸಿಲಿನ್ 500ಮಿಗ್ರಾಂ ದಿನಕ್ಕೆ ನಾಲ್ಕು ಸಲದಂತೆ ಒಂದು ವಾರ, ಮತ್ತು 8 ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ಅಮಾಕ್ಸಿಸಿಲಿನ್ ಅಥವಾ ಆಂಪಿಸಿಲಿನ್ ದಿನಕ್ಕೆ 30-50ಮಿಗ್ರಾಂ/ಕೆಜಿಯಂತೆ ಒಂದು ವಾರ ನೀಡಬೇಕು. ಎರಡನೇ ಹಂತದಲ್ಲಿ ಯಕೃತ್ತು ಮತ್ತು ಮೂತ್ರಪಿಂಡಗಳ ಸಮಸ್ಯೆ, ಕೆಮ್ಮಿನಲ್ಲಿ ರಕ್ತಸ್ರಾವ, ಕರುಳಿನಲ್ಲಿ ರಕ್ತಸ್ರಾವ, ಮಿದುಳುಪೊರೆಯ ಉರಿಯೂತ ಇತ್ಯಾದಿ ಸಮಸ್ಯೆಗಳಾದರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.

ವೈರಲ್ ಹೆಪಟೈಟಿಸ್ ಉಳ್ಳವರಲ್ಲಿ ವಾಂತಿಯನ್ನು ನಿಯಂತ್ರಿಸುವುದಕ್ಕೆ ಔಷಧವನ್ನು ನೀಡಬಹುದು ಮತ್ತು ಎಂದಿನಂತೆ ಆಹಾರವನ್ನು ಸೇವಿಸಬಹುದು. ವಿಪರೀತವಾದ ವಾಂತಿಯಿದ್ದರೆ ಆಸ್ಪತ್ರೆಗೆ ದಾಖಲಾಗಬೇಕಾಗಬಹುದು. ಅಪರೂಪಕ್ಕೆ ರೋಗವು ಉಲ್ಬಣಿಸಿ ಯಕೃತ್ತಿನ ವೈಫಲ್ಯದ ಲಕ್ಷಣಗಳುಂಟಾದರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.

Updated: May 13, 2020

©RationalMedicine.Org

One Comment:

  1. ಬಿ.ರಾಜಶೇಖರಮೂರ್ತಿ

    ಇಡೀ ವಿಶ್ವವೇ ಭಯದ ವಾತಾವರಣದಲ್ಲಿರುವಾಗ ನೀವು ಆಶಾಕಿರಣದಂತೆ ಅತ್ಯಂತ ಸರಳವಾಗಿ ಜನ ಸಾಮಾನ್ಯ ರಿಗೆ ಅರ್ಥ ವಾಗುವಂತೆ ಕೊರೋನ ಸೋಂಕು ಮತಿತ್ತರ ಸೋಂಕುಗಳ ಬಗ್ಗೆಯೂ ತಿಳಿಸಿದ್ದೀರಿ. ಜೊತೆಗೆ ಹೇಗೆ ಚಿಕಿತ್ಸೆಗೆ ಮುಂದಾಗಬೇಕೆಂದು ತಿಳಿಸಿದ್ದೀರಿ. ತಮಗೆ ಅತ್ಯಂತ ಮನಪೂರ್ವಕ ಧನ್ಯವಾದಗಳು.

Leave a Reply

Your email address will not be published. Required fields are marked *